ಡೇಟನ್ -
ಅಮೆರಿಕ ಸಂಯುಕ್ತ ಸಂಸ್ಥಾನಗಳ ಒಹಾಯೊ ರಾಜ್ಯದ ಒಂದು ನಗರ.  ಮಾಂಟ್ಗೊಮರಿ ಕೌಂಟಿಯ ಕೇಂದ್ರ.  ಸಿನ್ಸಿನಾಟೀ ನಗರಕ್ಕೆ 52 ಮೈ. ಉತ್ತರದಲ್ಲಿ ಉ. ಅ 39ಲಿ50' ಮತ್ತು ಪ.ರೇ. 84ಲಿ10' ಮೇಲೆ, ಮೈಯಾಮೀ, ಮ್ಯಾಡ್, ಸ್ಟಿಲ್‍ವಾಟರ್ ನದಿಗಳು ಸಂಗಮಿಸುವ ಸ್ಥಳದಲ್ಲಿದೆ.  ಜನಸಂಖ್ಯೆ 2,43,601 (1970).

	ಬಿಳಿಯರು ಇಲ್ಲಿಯ ನೆಲವನ್ನು ಆಕ್ರಮಿಸಿಕೊಳ್ಳುವುದಕ್ಕೆ ಮುಂಚೆ ಇದು ಷಾನೀ ಇಂಡಿಯನರ ಬೇಟೆಯ ಪ್ರದೇಶವಾಗಿತ್ತು.  1790ರಲ್ಲಿ ಇಂಡಿಯನರೊಂದಿಗೆ ನಡೆಸಿದ ಯುದ್ಧದಲ್ಲಿ ಇಂಡಿಯನರನ್ನು ಆಂತೋನಿ ವೇನ್ ನಿರ್ಮೂಲಗೊಳಿಸಿದ.  ನ್ಯೂ ಜರ್ಸಿಯ ಜೊನಾತನ್ ಡೇಟನ್ ಮತ್ತು ಇತರ ಕೆಲವು ನಿವೃತ್ತ ಯೋಧರು ಇಲ್ಲಿ ನಗರಕ್ಕೆ ಆಸ್ತಿವಾದ ಹಾಕಿದರು.   1796ರಲ್ಲಿ ಮೊದ ಮೊದಲ ವಲಸೆಗಾರರು ದೋಣಿಯಲ್ಲಿ ಇಲ್ಲಿಗೆ ಬಂದರು.  1828ರಲ್ಲಿ ಮೈಯಾಮೀ ಮತ್ತು ಈರೀ ಕಾಲುವೆಗಳನ್ನು ನಿರ್ಮಿಸಿದ ಮೇಲೆ ಇದು ಕೃಷಿ ಕೈಗಾರಿಕೆಗಳ ಪ್ರಗತಿಯ ಕೇಂದ್ರವಾಯಿತು.  1841ರಲ್ಲಿ ಇದಕ್ಕೆ ನಗರದ ಸನ್ನದು ದೊರಕಿತು. 

	ಡೇಟನ್‍ನಲ್ಲಿ 500ಕ್ಕೂ ಹೆಚ್ಚು ಕೈಗಾರಿಕೆಗಳಿವೆ.  ಇಲ್ಲಿ 800ಕ್ಕೂ ಹೆಚ್ಚು ಸರಕುಗಳು ತಯಾರಾಗುತ್ತವೆ.  ಯಂತ್ರೋಪಕರಣ, ಕಾಗದ ಶೀತಕ, ಟೈರು ಪ್ಲ್ಯಾಸ್ಟಿಕ್ ಸರಕು, ಬೈಸಿಕಲ್, ಸಾಬೂನು, ಕೊಳವೆ ಮುಂತಾದವು ಇಲ್ಲಿ ಉತ್ಪಾದನೆಯಾಗುವ ಸರಕುಗಳಲ್ಲಿ ಕೆಲವು.   ವಾಯುಸೇನಾ ತಂತ್ರe್ಞÁನ ಸಂಸ್ಥೆ, ಆಂಟಿಯೋಕ್ ಕಾಲೇಜ್, ಸೆಂಟ್ರಲ್ ಸ್ಟೇಟ್ ಕಾಲೇಜ್, ಡೇಟನ್ ವಿಶ್ವವಿದ್ಯಾಲಯ, ವಿಲ್ಬರ್‍ಫೋರ್ಸ್ ವಿಶ್ವವಿದ್ಯಾಲಯ-ಇವು ಇಲ್ಲಿಯ ಕೆಲವು ಮುಖ್ಯ ಶಿಕ್ಷಣ ಸಂಸ್ಥೆಗಳು.  ಇಲ್ಲಿ 300ಕ್ಕೂ ಹೆಚ್ಚು ಚರ್ಚುಗಳೂ ಪ್ರಾರ್ಥನಾ ಮಂದಿರಗಳೂ ಹತ್ತು ಆಸ್ಪತ್ರೆಗಳೂ ಇವೆ.  ವಾಯುಸೇನಾ ಕೇಂದ್ರೀಯ ವಸ್ತು ಸಂಗ್ರಹಾಲಯ, ಪ್ರಾಕೃತಿಕ ಇತಿಹಾಸ ವಸ್ತುಸಂಗ್ರಹಾಲಯ ಮುಂತಾದವೂ ಹಲವು ಗ್ರಂಥಾಲಯಗಳೂ ಇವೆ.  ಸಾರ್ವಜನಿಕ ಗ್ರಂಥಾಲಯದಲ್ಲಿ ಐದು ಲಕ್ಷಕ್ಕೂ ಹೆಚ್ಚು ಗ್ರಂಥಗಳಿವೆ. 

	ಡೇಟನ್ ಒಂದು ಸುಂದರ ನಗರ.  ಇದು ಅತ್ಯಂತ ನಿರ್ಮಲವಾದ ನಗರಗಳಲ್ಲೊಂದು.  1,100ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ 21 ಉದ್ಯಾನಗಳೂ 3 ಗಾಲ್ಫ್ ಮೈದಾನಗಳೂ ಇವೆ.   23 ಎಕರೆ ವಿಸ್ತೀರ್ಣವುಳ್ಳ ಐಲೆಂಡ್ ಪಾರ್ಕು ಮೈಯಾಮೀ ನದಿಯ ನಡುಗಡ್ಡೆಯಲ್ಲಿದೆ.  ಇದೊಂದು ಸುಯೋಜಿತ ನಗರ.
(ಆರ್.ಸಿ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ